ಪೆಗಸಸ್ -
ಉತ್ತರ ಆಕಾಶದ ಪ್ರಮುಖ ನಕ್ಷತ್ರಪುಂಜಗಳ ಪೈಕಿ ಒಂದು. 2ನೆಯ ಕಾಂತಿವರ್ಗದಿಂದ 6 ನೆಯ ಕಾಂತಿವರ್ಗದ ವರೆಗಿರುವ ಸುಮಾರು 120 ನಕ್ಷತ್ರಗಳು ಇದರಲ್ಲಿವೆ.  ಬಹಳಷ್ಟು ಪ್ರಕಾಶ ಬೀರುವ 2ನೆಯ ಕಾಂತಿವರ್ಗದ ನಾಲ್ಕು ಪ್ರಧಾನ ನಕ್ಷತ್ರಗಳು ಇವು : ಮಾರ್ಕೆಬ್, ಷೀಯೆಟ್, ಆಲ್ಜಿನಿಬ್ ಮತ್ತು ಎನಿಫ್. ಇವುಗಳ ಪೈಕಿ ಮೊದಲ ಮೂರೂ ಆಂಡ್ರೂಮಿಡ ಪುಂಜದ 2 ನೆಯ ಕಾಂತಿವರ್ಗದ ಆಲ್ಫೆರಾಟ್ಸ್ ಎಂಬ ನಕ್ಷತ್ರವೂ ಸೇರಿ ಸರಿಸುಮಾರಾಗಿ ದೊಡ್ಡ ಚೌಕವನ್ನು ನಿರ್ಮಿಸುತ್ತವೆ.  ಇದೇ ಪೆಗಸಸನ ಚೌಕ (ದಿ ಸ್ಕ್ವೇರ್ ಆಫ್ ಪೆಗಸಸ್).  ಮಾರ್ಗಶಿರ-ಪುಷ್ಯ ಮಾಸಗಳ ಚಂದ್ರರಹಿತ ರಾತ್ರಿಗಳಲ್ಲಿ ಈ ಚೌಕ ಬಲು ಆಕರ್ಷಕವಾಗಿ ಗೋಚರಿಸುತ್ತದೆ.

ಗ್ರೀಕ್ ಪುರಾಣದ ರೀತ್ಯ ಹಾವುಗೂದಲಿನ ಮೂವರು ರಾಕ್ಷಸ ಸ್ತ್ರೀಯರ ಪೈಕಿ ಮಿಡ್ಯೂಸ ಎಂಬವಳನ್ನು ಸಂಹರಿಸಿದ ಪರ್ಷಿಯಸ್ ಮರಳುತ್ತಿದ್ದಾಗ ಸೆಟಸ್ ಎಂಬ ಹೆಸರಿನ ಕಡಲ ದೈತ್ಯದ ಅಪಾಯದಿಂದ ಆಂಡ್ರೂಮಿಡ ಎಂಬ ರಾಜಕುಮಾರಿಯನ್ನು ಪಾರು ಮಾಡಿದ ಎಂದಿದೆ.  ಮುಂದೆ ಈ ಪ್ರಾಣಿ ಗ್ರೀಸಿನ ಕಾರಿಂತ್ ಪಟ್ಟಣದ ವೀರ ಬ್ಯಲೆರ್‍ಫಾನನ ವಶವಾಯಿತು. ಇದನ್ನು ಏರಿದ ಪರ್ಸಿಯಸ್ ಕೈಮೀರ ಎಂಬ ಪ್ರಾಣಿಯನ್ನು ಕೊಂದನೆಂದೂ ಮುಂದೆ ಇವನ ಮರಣಾನಂತರ ಇವನಿಗೆ ಆಕಾಶದಲ್ಲಿ ನಕ್ಷತ್ರಪುಂಜದ ಪದವಿ ದೊರೆಯಿತೆಂದೂ ಇದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ